ಕಾರ್ಡೊವ

 ಸ್ಪೇನಿನ ಆಂಡಲೂಷಿಯದ ಒಂದು ಪ್ರಾಂತ್ಯ ಮತ್ತು ಮುಖ್ಯ ನಗರ. ಕಾರ್ಡೊವ ನಗರ ದಕ್ಷಿಣ ಇಳಿಜಾರಿನ ಪ್ರದೇಶದಲ್ಲಿ, ಗ್ವಾಡಲ್ ಕಿವರ್ ನದಿಯ ಬಲ ದಂಡೆಯ ಮೇಲೆ ಇದೆ. ಜನಸಂಖ್ಯೆ 1,98,148(1960). ಈ ನಗರದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಕಿರಿದಾದ ರಸ್ತೆಗಳೂ ಮೂರಿಷ್ ಶೈಲಿಯ ಕಟ್ಟಡಗಳೂ ಇವೆ. ಉತ್ತರ  ದಕ್ಷಿಣ ಭಾಗಗಳಲ್ಲಿ ರೋಮನರು ನಿರ್ಮಿಸಿದ ಕಟ್ಟಡಗಳ ಅಡಿಪಾಯಗಳು ಉಳಿದಿವೆ. ಹಾಳು ಬಿದ್ದ ಗೋಪುರಗಳು, ಹೆಬ್ಬಾಗಿಲುಗಳು ಮತ್ತು ಪಟ್ಟಣವನ್ನು ಸುತ್ತುವರಿದಿದ್ದ ಕೋಟೆ ಗೋಡೆಯ ಕೆಲವು ಭಾಗಗಳು ಉಳಿದಿವೆ. ಪಟ್ಟಣದ ಹಿಂಬದಿಯಲ್ಲಿರುವ ಬೆಟ್ಟದ ಮೇಲೆ ಆಲಿವ್ ಮತ್ತು ಕಿತ್ತಳೆ ಹಣ್ಣುಗಳ ತೋಟಗಳನ್ನೂ ಪಶ್ಚಿಮದ ಗೋಡೆಯ ಹಿಂಬದಿಗೆ ಉದ್ಯಾನಗಳನ್ನೂ ಬೆಳೆಸಿದ್ದಾರೆ. ಹದಿನಾರು ಕಮಾನುಗಳುಳ್ಳ ರೋಮನ್ ತಳಹದಿಯ ಮೇಲೆ ಕಟ್ಟಿರುವ ಮೂರಿಷ್ ಸೇತುವೆಯಿಂದ ಕಾರ್ಡೊವಕ್ಕೂ ನದಿಯ ಆಚೆಯ ಪ್ರದೇಶಕ್ಕೂ ಸಂಪರ್ಕ ಏರ್ಪಟ್ಟಿದೆ. ಸೇತುವೆಯ ದಕ್ಷಿಣ ತುದಿಯಲ್ಲಿ ಲಾಕಲಹೊರ್ರ ಗೋಪುರವೂ ಉತ್ತರದಲ್ಲಿ ಹಾಳುಬಿದ್ದಿರುವ ಊರುಬಾಗಿಲೂ ನಗರಾಧಿದೇವತೆ ಆರ್ಕೇಂಜೆಲ್ ರಾಫೆಲನ ಪ್ರತಿಮೆಯೂ ಇವೆ.  ಆಲ್ಕಜಾರ್ ಎಂಬ ಹಿಂದಿನ ಅರಮನೆ ಇರುವುದು ಸೇತುವೆಯ ಪಶ್ಚಿಮಕ್ಕೆ. ಅರಬ್ ಕಲೀಫರು ತಮ್ಮ ನಿವಾಸವಾಗಿ ಮಾರ್ಪಡಿಸಿಕೊಂಡಿದ್ದ ರೋಮನರ ನಾಗರಿಕ ಮತ್ತು ಸೈನಿಕರ  ಕಟ್ಟಡಗಳಿರುವುದು ಈ ಭಾಗದಲ್ಲಿ. ಹಳೆಯ ಆಲ್ಕಜಾರ್ ಆವರಣದಲ್ಲಿ ಅರಸರ ಅಂಗರಕ್ಷಕರು ವಾಸಿಸುತ್ತಿದ್ದ ಕಟ್ಟಡಗಳು ಈಗ ಕಾರ್ಮಿಕ ನಿವಾಸಗಳು. ಧಾರ್ಮಿಕ ಚರ್ಚೆಗಳಿಗಾಗಿ ಮೀಸಲಾಗಿದ್ದ ಮಂದಿರ ಇಂದು ಜೀರ್ಣಸ್ಥಿತಿಯಲ್ಲಿದೆ. ಅದರ ಒಂದು ಭಾಗ ಈಗ ಬಂದಿಖಾನೆ. ನದಿಯ ದಂಡೆಯ ಮೇಲಿರುವ ಆ ನಿವೇಶನದಲ್ಲಿ ಉದ್ಯಾನವನ, ಬಿಷಪರ ವಾಸಗೃಹ, ಮತ್ತು ಕ್ರೈಸ್ತ ಧರ್ಮವಿದ್ಯಾಲಯಗಳು, ಪುರಭವನ, ಸೇಂಟ್ ಹಿಪೊಲಿಟೊ ಮತ್ತು ಸೇಂಟ್ ನಿಕೊಲಾಸ್ ಡಿ. ಲಾವಿಲ್ಲ ಚರ್ಚುಗಳು, ಪುರಭವನ, ವೈದ್ಯಶಾಲೆಗಳು ಸಂಗೀತಗೃಹ, ಪ್ರಾಕ್ತನ ಮತ್ತು ಕಲಾವಸ್ತು ಸಂಗ್ರಹಾಲಯಗಳು ಇವೆ. ಇಲ್ಲಿರುವ ಕಾಲೇಜುಗಳು ಮತ್ತು ಶಾಲೆಗಳ ಪೈಕಿ 1590ರಲ್ಲಿ ಕಾರ್ಡೊವದ ಬಿಷಪ್ ಪಾಚಿಕೊ ಸ್ಥಾಪಿಸಿದ ಸ್ತ್ರೀ ಮಹಿಳಾ ವಿದ್ಯಾಲಯವೂ ಒಂದು. ಇದು ಪದವಿ ಪ್ರಧಾನಮಾಡುವ ಅಧಿಕಾರ ಪಡೆದಿದೆ.

 ಕಾರ್ಡೊವದ ಮೂರಿಷ್, ಮತ್ತು ಕ್ರೈಸ್ತ ಕಟ್ಟಡಗಳನ್ನೆಲ್ಲ ಮೀರಿಸಿದ್ದು ಅಲ್ಲಿಯ ಮಸೀದಿ. ಮೊದಲಿಗೆ ಅದು 1236ರಲ್ಲಿ  ಪ್ರತಿಷ್ಠಾಪಿಸಿದ ಮೇರಿಯ ಆರಾಧನಾ ಮಂದಿರವಾಗಿತ್ತು. 1ನೆಯ ಅಬ್ದ್-ಅಲ್-ರಹಮಾನ್ ರೋಮನ್ ದೇವಸ್ಥಾನ ಮತ್ತು ವಿಸಿಗಾತ್ಸರ ಚರ್ಚಿನ ಅಡಿಪಾಯದ ಮೇಲೆ ಇದನ್ನು ಕಟ್ಟಿದ. ತನ್ನ ರಾಜಧಾನಿಯನ್ನು ಪೂರ್ವ ದೇಶಗಳ ಪವಿತ್ರ ಸ್ಥಳಗಳನ್ನು ಮೀರಿಸುವ ಧಾರ್ಮಿಕ ಕೇಂದ್ರವನ್ನಾಗಿ ಮಾಡುವ ಆಸೆ ಈತನಿಗೆ ಇತ್ತು. ಬೆಳೆಯುತ್ತಿದ್ದ ಜನಸಂಖ್ಯೆಯ ಅನುಕೂಲಕ್ಕಾಗಿ 2ನೆಯ ಅಬ್ದ್-ಅಲ್-ರಹಮಾನ್ ಮತ್ತು 2ನೆಯ ಅಲ್-ಹಕಂ ಈ ಕಟ್ಟಡವನ್ನು ವಿಸ್ತರಿಸಿದರು. ಕಲೀಫ 2ನೆಯ ಹಿಸಾಮನ ಮುಖ್ಯಮಂತ್ರಿ        ಅಲ್-ಮನ್‍ಸುರ್ ಆ ಪವಿತ್ರ ಸ್ಥಳವನ್ನು ಇನ್ನೂ ವಿಸ್ತರಿಸಿ ಕೆಲವು ಬದಲಾವಣೆ ಮಾಡಿದ. ಇದು ಜೀಕಾ ಅಥವಾ ಶುದ್ಧೀಕರಣ ಮಂದಿರವೆಂದು ಪರಿಗಣಿತವಾಗಿ, ಮೆಕ್ಕದ ಕಾಬವನ್ನು ಬಿಟ್ಟರೆ ಇದೇ ಅತಿ ದೊಡ್ಡ ಮುಸ್ಲಿಂ ಪವಿತ್ರ ಮಂದಿರವಾಯಿತು. ಕಟ್ಟಡ ಚತುಷ್ಕೋಣಾಕೃತಿಯಲ್ಲಿ 590' ಉದ್ದವೂ 425' ಅಗಲವೂ ಇದ್ದು, ರೋಮಿನ ಸೇಂಟ್ ಪೀಟರ್ ಚರ್ಚ್‍ಗಿಂತ ಸ್ವಲ್ಪ ಕಿರಿದಾಗಿದೆ. ದಕ್ಷಿಣ ಭಾಗದ ಸಭಾಭವನದಲ್ಲಿ ಪಾರ್ಫೆರಿ, ಜಾಸ್ಪರ್ ಮತ್ತು ವಿವಿಧ ಬಣ್ಣಗಳ ಅಮೃತಶಿಲೆಗಳಿಂದ ಕಟ್ಟಿರುವ, ಅನೇಕ ಕಂಬಗಳಿಂದ ಕೂಡಿದ ಭಾಗಗಳಿವೆ. ಈ ಮಹಾಕಟ್ಟಡಕ್ಕೆ ಬೇಕಾಗಿದ್ದ ವಸ್ತುಗಳು ಅನೇಕ ಪುರಾತನ ಕಟ್ಟಡಗಳಿಂದಲೂ ವಿವಿಧ ಪ್ರಾಂತ್ಯಗಳಿಂದಲೂ ಸರಬರಾಜಾಗಿದ್ದುವು.  ಬಿeóÁಂಟಿನ್ ಚಕ್ರವರ್ತಿ 4ನೆಯ ಲಿಯೋ 1ನೆಯ ಅಬ್ದ-ಅಲ್-ರಹಮಾನನಿಗೆ ಕಳಿಸಿದ ಕೊಡುಗೆಯೊಂದಿಗೆ ಒಳ್ಳೆಯ ಶಿಲ್ಪಿಗಳನ್ನೂ ಕಳಿಸದ್ದ. ಒಟ್ಟು 850 ಕಂಬಗಳಿಂದ ಕೂಡಿದ ಈ ಕಟ್ಟಡದಲ್ಲಿ ಸಮಾನ ಎತ್ತರದ (12')ಮೂರಿಷ್ ಕಮಾನುಗಳಿವೆ. 16ನೆಯ ಶತಮಾನದಲ್ಲಿ ಶಿಲುಬೆಯಾಕಾರದ ಪ್ರಾರ್ಥನಾ ಸಾಲುಗಳನ್ನು ಮಂದಿರದಲ್ಲಿ ರಚಿಸಿದಾಗ ಅದರ ಮೂರಿಷ್ ಶೈಲಿ ಹಾಳಾಯಿತು. ಮಸೀದಿಯ ಗೋಪುರದ ಬದಲು 300' ಎತ್ತರದ ಕ್ರೈಸ್ತಮಂದಿರದ ಕರೆಗಂಟೆಯ ಗೋಪುರ ಬಂತು. ಇಲ್ಲಿಯ ಕಮಾನೊಂದನ್ನು ಕೀಳುತ್ತಿದ್ದಾಗ ಪ್ರಾಚೀನ ಮೂರಿಷ್ ಶೈಲಿಯ ಕೆತ್ತನೆ ಮತ್ತು ಚಿತ್ರಕಲೆಯಿದ್ದ, ಸ್ವಲ್ಪವೂ ಕೆಡದಿದ್ದ ಮರದ ವಸ್ತುವೊಂದು ಪತ್ತೆಯಾಯಿತು. ಪ್ರಾರ್ಥನ ಮಂದಿರ 3ನೆಯ ಮಿಹ್ರಬ್ ಅಥವಾ ಗೂಡು ಈ ಕಟ್ಟಡದಲ್ಲ ಅಪೂರ್ವವಾದ್ದ. ಇದನ್ನು ಒಂದೇ ಅಮೃತಶಿಲೆಯಿಂದ ಕಟ್ಟಲಾಗಿದೆ. ಇದು ಬಿeóÁಂಟಿನ್ ಶೈಲಿಯಲ್ಲಿದೆ.

 ಮೂರ್ ಜನರ ಕಾಲದಲ್ಲಿ ಈ ನಗರ ಬೆಳ್ಳಿ, ರೇಷ್ಮೆ ಕಸೂತಿ ಕೆಲಸ ಮತ್ತು ವಿಶಿಷ್ಟ ರೀತಿಯ ಚರ್ಮಗೆಲಸಗಳಿಗೆ ಪ್ರಸಿದ್ಧವಾಗಿತ್ತು,   ಈಗಲೂ ಚಿನ್ನಬೆಳ್ಳಿಗಳ ಸೂಕ್ಷ್ಮ ಕೆಲಸ ಇಲ್ಲಿಯ ವೈಶಿಷ್ಟ್ಯ. ಚರ್ಮದ ಕೈಗಾರಿಕೆ ಅವನತಿ ಹೊಂದಿತು. ಕಾರ್ಡೊವದ ಆಧುನಿಕ ಕೈಗಾರಿಕೆಗಳಲ್ಲಿ  ಮದ್ಯಗಳ ತಯಾರಿಕೆ ಮತ್ತು ನೇಯ್ಗೆ ಕೆಲಸ ಮುಖ್ಯವಾದವು. ಕಾರ್ಡೊವಕ್ಕೆ ಸಮೀಪದಲ್ಲಿರುವ ಗಣಿಗಳಲ್ಲಿ ತಾಮ್ರ ದೊರೆಯುತ್ತದೆ. ಚಿನ್ನ, ಬೆಳ್ಳಿ, ಕಲಾಬತು, ಎಣ್ಣೆ, ಒರಟು ಬಟ್ಟೆ ಇವು ವ್ಯಾಪಾರದ ಮುಖ್ಯವಸ್ತುಗಳು. ಪ್ರವಾಸೋದ್ಯಮ ಮತ್ತೊಂದು ಆದಾಯ ತರುವ ಮಾರ್ಗ.

 ಚರಿತ್ರೆ : ಮೊದಲಿಗೆ ಕಾರ್ಡೊವ ಕಾರ್ಥೇಜಿನವರಿಗೆ ಸೇರಿತ್ತು. ಮಾರ್ಕಸ್ ಮಾರ್ಸೆಲಸ್ ಕ್ರಿ. ಪೂ. 152ರಲ್ಲಿ ಇದನ್ನು ಆಕ್ರಮಿಸಿದಾಗ ಸ್ಪೇನಿನಲ್ಲಿ ಇದೇ ರೋಮನರ ಮೊದಲನೆಯ ವಸಾಹತಾಯಿತು. ಕ್ರಿ.ಪೂ. 45ರಲ್ಲಿ ನಡೆದ ಮುಂಡ ಯುದ್ಧದ ಅನಂತರ ಜೂಲಿಯಸ್ ಸೀಸರ್ ಇಲ್ಲಿಯ 20,000 ಪ್ರಜೆಗಳನ್ನು ಕೊಂದ. ಪಾಂಪೆಯ ಮಕ್ಕಳಿಗೆ ಇವರು ಸಹಾಯ ಮಾಡಿದರೆಂಬುದೇ ಕಾರಣ. ಈ ನಗರ ಆಗಸ್ಟಸ್ ಕಾಲದಲ್ಲಿ ಪೌರಾಡಳಿತಕ್ಕೊಳಪಟ್ಟು ಬೆಟಿಕ ಪ್ರಾಂತ್ಯದ ರಾಜಧಾನಿಯಾಗಿ ಪ್ರಾಮುಖ್ಯ ಹೊಂದಿತೆಂದು ಕ್ರಿ.ಪೂ. 1ನೆಯ ಶತಮಾನದ ಅಂತ್ಯ ಭಾಗದಲ್ಲಿದ್ದ ಸ್ಟ್ರಾಟೋ ಎಂಬ ಇತಿಹಾಸಕಾರ ಹೇಳಿದ್ದಾನೆ. 6ರಿಂದ 8ನೆಯ ಶತಮಾನದವರೆಗೆ ಆಳಿದ ವಿಸಿಗಾತ್ಸರ ಕಾಲದಲ್ಲಿ ಕಾರ್ಡೊವ ಪ್ರಸಿದ್ಧವಾಯಿತು. 711ರಲ್ಲಿ ಮೂರ್ ಜನರ ದಾಳಿಗೆ ತುತ್ತಾಗಿ ನಾಶಹೊಂದಿತು. 756 ರಲ್ಲಿ ಇದು 1ನೆಯ ಅಬ್ದ್-ಅಲ್-ರಹಮಾನನ ರಾಜಧಾನಿಯಾದಾಗ ಮತ್ತೆ ಇದರ ಉಚ್ಛ್ರಾಯಕಾಲ ಆರಂಭವಾಯಿತೆನ್ನಬಹುದು. ಉಮಾಯದ್ ಕಲೀಫರ ಆಡಳಿತ ಕಾಲದಲ್ಲಿ ಹೊಸ ಹೊಸ ಅರಮನೆಗಳೂ ಮಸೀದಿಗಳೂ ನಿರ್ಮಾಣವಾಗಿ ಪಟ್ಟಣದ ವಿಸ್ತಾರ ಇಮ್ಮಡಿಸಿತು. ಇದರ ಕೀರ್ತಿ ಪ್ರತಿಷ್ಠೆಗಳು ಮತ್ತೆ ಶಿಖರ ಮುಟ್ಟಿದ್ದು 10ನೆಯ ಶತಮಾನದ ಮಧ್ಯಭಾಗದಲ್ಲಿ, ಮೂರನೆಯ ಅಬ್ದ್-ಅಲ್-ರಹಮಾನನ ಕಾಲದಲ್ಲಿ.  1010ರಲ್ಲಿ ರಾಜ್ಯಾಧಿಕಾರಕ್ಕಾಗಿ ನಡೆದ ತಿಕ್ಕಾಟದ ಫಲವಾಗಿ ಕಾರ್ಡೊವ ಅಭಿವೃದ್ಧಿ ಕುಂಠಿತವಾಯಿತು. ಕ್ಯಾಸ್ಟಿಲೆಯ 3ನೆಯ ಫರ್ಡಿನೆಂಡ್ 1236ರಲ್ಲಿ ಕಾರ್ಡೊವವನ್ನು ಸುಲಭವಾಗಿ ಆಕ್ರಮಿಸಿಕೊಂಡ. ಮೂರಿಷ್ ಆಡಳಿತ ತಪ್ಪಿ ಸ್ಪ್ಯಾನಿಷ್ ಆಡಳಿತ ಬಂದರೂ ಕಾರ್ಡೊವದ ಕ್ಷೀಣದೆಶೆ ಕೊನೆಗೊಳ್ಳಲಿಲ್ಲ. 1808ರಲ್ಲಿ ಫ್ರೆಂಚರು ನಡೆಸಿದ ಲೂಟಿ ಮತ್ತು ದಾಳಿಯಿಂದ ಅದಕ್ಕೆ ಚೇತರಿಸಿಕೊಳ್ಳಲಾಗದಷ್ಟು ಪೆಟ್ಟು ಬಿತ್ತು. 1936-39ರಲ್ಲಿ ನಡೆದ ಅಂತರ್ಯುದ್ಧದಲ್ಲಿ ಕಾರ್ಡೊವವನ್ನು ಜನರಲ್ ಫ್ರಾನ್ಸಿಸ್‍ಕೊ ಫ್ರಾಂಕೋ ಬಹಾಂಡೆಯ ರಾಷ್ಟ್ರೀಯ ಸೈನ್ಯ ವಶಮಾಡಿಕೊಂಡಿತು.

 ವಾಗ್ಮಿ ಮಾರ್ಕಸ್ ಆಗ್ಮಿಯಸ್ ಸೆನೆಕ, ಈತನ ಪ್ರಸಿದ್ಧ ಮಗ ಲೂಸಿಯನ್ (ಕ್ರಿ.ಪೂ. 4-ಕ್ರಿ.ಶ. 65), ಕವಿ ಲುಕಾನ್ (39-65) ತತ್ತ್ವಶಾಸ್ತ್ರಜ್ಞರಾದ ಅವರೋಸ್ (1126-1198) ಮತ್ತು ಮೈಮಂಡಿಸ್ (1135-1204), ಕಲೆಗಾರ ಪಾಬ್ಲೊ ಡಿ ಸೆಸ್ಪಿಡಸ್ (1538-1608) ಇವರೆಲ್ಲ ಕಾರ್ಡೋವದಲ್ಲಿ ಜನ್ಮತಾಳಿದ ಪ್ರತಿಭಾವಂತರು. ನೇಪಲ್ಸನ್ನು ಜಯಿಸಿದ ಸೇನಾನಾಯಕ ಗೊಂಜಲೊ ಫರ್‍ನಾಂಡಿಜ್ ಡಿ ಹುಟ್ಟಿದ್ದು ಕಾರ್ಡೊವದ ಬಳಿಯ ಮಾಂಟಿಲ್ಲ ನಗರದಲ್ಲಿ.

 ಕಾರ್ಡೊವ ಪ್ರಾಂತ್ಯ ಆಂಡಲೂಸಿಯ ಪ್ರದೇಶದ ಒಂದು ಭಾಗ. ಇದರ ಜನಸಂಖ್ಯೆ 7, 98,437 (1960); ವಿಸ್ತೀರ್ಣ 5,296. ಚ.ಮೈ. ಗ್ವಾಡಲ್‍ಕಿವರ್ ನದಿ ಈ ಪ್ರಾಂತ್ಯದ ನಡುವೆ ಪೂರ್ವ-ಈಶಾನ್ಯದಿಂದ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಹರಿಯುತ್ತದೆ.  ನದಿಯ ಉತ್ತರಕ್ಕಿರುವುದು ಸಿಯರ ಮೊರೆನ ಪರ್ವತ ಪ್ರದೇಶ. ಇಲ್ಲಿ ಹೆಚ್ಚು ಜನವಸತಿ ಇಲ್ಲ. ಚಳಿಗಾಲದಲ್ಲಿ ಕುರಿಗಳಿಗೆ ಒಳ್ಳೆಯ ಮೇವು ದೊರೆಯುತ್ತದೆ. ಕಲ್ಲಿದ್ದಲು, ಬೆಳ್ಳಿ, ಸೀಸ ಮತ್ತು ಸತು ಇಲ್ಲಿಯ ಖನಿಜಗಳು. ಗ್ವಾಡಲ್‍ಕಿವರ್ ನದಿಯ ದಕ್ಷಿಣಕ್ಕಿರುವ ಲಾ ಕಾಮಪಿನ ಮೈದಾನ ಫಲವತ್ತಾದ್ದು. ಇದು ಕೃಷಿಗೂ ದನ-ಕುದುರೆಗಳ ಮೇವಿಗೂ ಉಪಯುಕ್ತ. ಉತ್ತಮ ದ್ರಾಕ್ಷಿ ತೋಟಗಳೂ ಆಲಿವ್ ಮರದ ತೋಪುಗಳೂ ಇವೆ.  ರ್ಯೂಟ್‍ನಲ್ಲಿ ಉಪ್ಪಿನ ಗಣಿಯಿದೆ. ಇದು ಸಂಪದ್ಭರಿತ ಪ್ರದೇಶವಾದ್ದರಿಂದ ಇದರ ಜನಸಾಂದ್ರತೆಯೂ ಹೆಚ್ಚು. ಕಾರ್ಡೊವದ್ದು ವೈಪರೀತ್ಯದ ವಾಯುಗುಣ. ಬೇಸಗೆಯಲ್ಲಿ ಮಳೆ. ಪರ್ವತಗಳ ಮೇಲೆ ತಿಂಗಳುಗಟ್ಟಲೆ ಮಂಜು ಮುಸುಕಿರುತ್ತದೆ. ಕಾರ್ಡೊವದ ಕೆಲವು ಮುಖ್ಯನಗರಗಳು ಇವು (1960ರಲ್ಲಿದ್ದಂತೆ ಇವುಗಳ ಜನಸಂಖ್ಯೆಯನ್ನು ಆವರಣಗಳೊಳಗೆ ಕೊಟ್ಟಿದೆ): ಪ್ಯೂಂಟಿ-ಜೆನಿಲ್ (30,185), ಲುಸೆನ (28,287), ಪ್ರಗೊ ಡಿ ಕಾರ್ಡೊವ (25,168), ಮಾಂಟಿಲ್ಲ (23,896), ಕಾಬ್ರ (20,739), ಪಲ್ಮ ಡೆಲ್ ರೆಯೊ (15,757), ಮತ್ತು ರ್ಯೂಟ್ (13,106), ಮಡ್ರಿಡ್ ಮತ್ತು ಇತರ ಮುಖ್ಯ ನಗರಗಳೊಡನೆ ಸಂಬಂಧ ಕಲ್ಪಿಸುವ ರೈಲುಮಾರ್ಗಗಳು ಕಾರ್ಡೊವದ ಮೂಲಕ ಹಾದುಹೋಗುತ್ತವೆ.

(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ